ಮಹಾಬಲೇಶ್ವರ -
ಮಹಾರಾಷ್ಟ್ರದಲ್ಲಿರುವ ಒಂದು ಪ್ರಸಿದ್ಧ ಪುಣ್ಯಕ್ಪೇತ್ರ ಹಾಗೂ ಗಿರಿಧಾಮ, ಇದು ಸಾತಾರಾ ಜಿಲ್ಲೆಯ ವಾಯಿ ತಾಲ್ಲೂಕಿನಲ್ಲಿ  ಪಶ್ಚಿದಲ್ಲಿರುವ ಸಹ್ಯಾದ್ರಿಪರ್ವತಶ್ರೇಣಿಯ ಒಂದು ಗಿರಿಶಿಖರ. ಪುಣೆಯಿಂದ ಸುಮಾರು 120ಕಿಮೀ ದೂರದಲ್ಲಿದೆ. ಸಮುದ್ರಮಟ್ಟದಿಂದ ಸುಮಾರು 1370 ಮೀ ಎತ್ತರದಲ್ಲಿದೆ. ಮಹಾಬಲ ಮತ್ತು ಅತಿಬಲ ಎಂಬ ಇಬ್ಬರು ರಾಕ್ಷಸರು ಪ್ರಬಲಿಸಿ ದೇವತೆಗಳನ್ನು ಸೋಲಿಸಿದರು. ದೇವತೆಗಳ ಪ್ರಾರ್ಥನೆಯ ಮೇರೆಗೆ ವಿಷ್ಣುವಿನಿಂದ ಅತಿಬಲನೂ ಮಹಾಮಾಯೆಯ ಕೈಯಿಂದ ಮಹಾಬಲನೂ ವಧಿಸಟ್ಟಲ್ಪರು, ಮಹಾಬಲನ ಕೋರಿಕೆಯ ಪ್ರಕಾರ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂಬ ಲಿಂಗಗಳ ರೂಪದಲ್ಲಿ ನೆಲೆನಿಂತರು. ಬ್ರಹ್ಮನ ಪತ್ನಿಯಾದ ಸಾವಿತ್ರಿಯ ಕೋಪದ ಕಾರಣದಿಂದ ವಿಷ್ಣು ಕೃಷ್ಣಾ ನದಿಯಾಗಿಯೂ ಶಿವ ವೆಣ್ಣಾನದಿಯಾಗಿಯೂ ಬ್ರಹ್ಮಕೋಯ್ನಾನದಿಯಾಗಿಯೂ ಇಲ್ಲಿ ಹರಿಯುತ್ತಿದ್ದಾರೆಂಬುದು ಐತಿಹ್ಯ. ಮಹಾಬಲೇಶ್ವರ ದೇವಾಲಯವನ್ನು ಹೇಮಾಡಪಂತಿ ಮಾದರಿಯಲ್ಲಿ ಕರಿಯ ಕಲ್ಲಿನಲ್ಲಿ ಕಟ್ಟಲಾಗಿವೆ. ಗರ್ಭಗುಡಿಯಲ್ಲಿಯ ಲಿಂಗದ ಮೇಲೆ ಏಳು ಸಣ್ಣ ಸಣ್ಣ ತಗ್ಗುಗಳಿಂದ ಸದಾ ನೀರು ಹರಿಯುತ್ತಿರುತ್ತದೆ. ಇದುವೇ ಕೃಷ್ಣಾ ನದಿಯಾಗಿ ಹರಿಯುವ ಪಂಚಗಂಗಾ ಉತ್ಪತ್ತಿಸ್ಥಾನ. ಈ ಶಿವಲಿಂಗದ ಬಳಿ ತಾಮ್ರದಲ್ಲಿ ಮಾಡಿದ ಎತ್ತರವಾದ ಗಜಾನನ ಮೂರ್ತಿ ಇದೆ. ಇಲ್ಲಿಯ ಶಾಸನವೊಂದರಿಂದ ಈ ಶಿವಾಲಯವನ್ನು ಸೇವುಣ ಚಕ್ರವರ್ತಿ ಇಮ್ಮಡಿ ಸಿಂಘಣ ಕ್ರಿ. ಶ. 1215ರ ಸುಮಾರಿಗೆ ಕಟ್ಟಿಸಿದನೆಂದು ತಿಳಿದುಬರುತ್ತದೆ. ಕೃಷ್ಣಾನದಿಯ ಅಧಿದೃವತೆ ಕೃಷ್ಣಾದೇವಿಗೆಂದೇ ಒಂದು ಮಂದಿರವನ್ನು ಕಟ್ಟಲಾಗಿದೆ. ಇಲ್ಲಿ ಕೃಷ್ಣಾನದಿಯ ಅಧಿದೇವತೆ ಕೃಷ್ಣಾದೇವಿಗೆಂದೇ ಒಂದು  ಮಂದಿರವನ್ನು ಕಟ್ಟಲಾಗಿದೆ. ಇಲ್ಲಿ ಕೃಷ್ಣಾದೇವಿಯ ಸುಂದರ ಮೂರ್ತಿಯಿದೆ. ದೇವಾಲಯದ ಪಶ್ಚಿಮಭಿತ್ತಿ ಬೆಟ್ಟವೇ ಆಗಿದ್ದು ಇದರಲ್ಲಿಯ ಐದು ರಂಧ್ರಗಳಲ್ಲಿ ನೀರು ಬರುತ್ತದೆ. ಈ ನೀರು ಮೊದಲು ಗೋಮುಖದಲ್ಲಿ ಹಾಯ್ದು ಮುಂದಕ್ಕೆ ನದಿಯಾಗಿ ಹರಿದಿದೆ. ಇದನ್ನು ಬ್ರಹ್ಮ ಕುಂಡ ಎಂದೂ ಹೇಳುತ್ತಾರೆ. ಕೃಷ್ಣಾದೇವಿಯ ವಾರ್ಷಿಕೋತ್ಸವ ಫಾಲ್ಗುಣಮಾಸದ ಬಹುಳದಲ್ಲಿ ಐದು ದಿನ ನಡೆಯುತ್ತದೆ. ಅಹಲ್ಯಾಬಾಯಿ ಹೋಳ್ಕರ್ ಕಟ್ಟಿಸಿದ ಕೇದಾರೇಶ್ವರ ದೇವಸ್ಥಾನ ಮತ್ತು ರಾಮದಾಸರು ಕಟ್ಟಸಿದ ಮಾರುತಿ ದೇವಸ್ಥಾನ ಪ್ರಸಿದ್ಧವಾದವು. ಇವಲ್ಲದೆ ರುದ್ರ, ಚಕ್ರ, ಹಂಸ ಪಿತೃ ಮುಕ್ತಿ, ಅರಣ್ಯ ಮತ್ತು ಮಲಾಪಕರ್ಷ ಎಂಬ ತೀರ್ಥಗಳೂ ಇಲ್ಲಿವೆ.

	(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ